ಕೃಷಿ ಉತ್ಪನ್ನ ವಿನಿಮಯ ಕೇಂದ್ರ 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವ್ಯವಸಾಯ ಪದಾರ್ಥಗಳ ವ್ಯಾಪಾರಿಗಳ ಸಂಘಟನೆ (ಪ್ರಾಡ್ಯೂಸ್ ಎಕ್ಸ್‍ಚೇಂಜ್). ಈ ಸಂಸ್ಥೆಯಿಂದ ನಿಗದಿಯಾದ ಮಾರುಕಟ್ಟೆಯ ಸ್ಥಳದಲ್ಲಿ ಇದರ ಸದಸ್ಯರು ನಿಶ್ಚಿತ ಸಮಯಗಳಲ್ಲಿ ಪರಸ್ಪರ ಸಂಧಿಸಿ ನಿಯಮ ನಿಬಂಧನೆಗಳಿಗೆ ಅನುಸಾರವಾಗಿ ವ್ಯವಹಾರ ನಡೆಸುತ್ತಾರೆ. ಪಾರಿಭಾಷಿಕವಾಗಿ ಈ ಸ್ಥಳವನ್ನು ವಲಯ (ರಿಂಗ್) ಅಥವಾ ಗರ್ತ (ಪಿಟ್) ಎಂದು ಕರೆಯುತ್ತಾರೆ. ಆಹಾರಧಾನ್ಯಗಳು, ಹತ್ತಿ, ಸೆಣಬು, ಎಣ್ಣೆಬೀಜಗಳು ಮುಂತಾದವು ಮುಖ್ಯವಾಗಿ ಈ ಕೇಂದ್ರಗಳಲ್ಲಿ ವಹಿವಾಟಿಗೆ ಒಳಪಡುವ ಪದಾರ್ಥಗಳು. ಇವು ಅಂತರರಾಷ್ಟ್ರೀಯ ವ್ಯಾಪರಕ್ಕೆ ಒಳಗಾದ ಪದಾರ್ಥಗಳು. ಒಂದು ಪದಾರ್ಥಕ್ಕೆ ಉತ್ಪನ್ನ ವಿನಿಮಯ ವ್ಯವಸ್ಥೆ ಬೆಳೆಯಬೇಕಾದರೆ ಅದಕ್ಕೆ ಕೆಲವು ಗುಣಗಳಿರುವುದು ಅವಶ್ಯ ; ಪದಾರ್ಥ ಬೇಗ ಕೆಡುವಂಥದಾಗಿರಬಾರದು. ದೊಡ್ಡ ಗಾತ್ರದಲ್ಲಿ ಆ ಪದಾರ್ಥದ ವ್ಯಾಪಾರವಾಗಬೇಕು. ಪದಾರ್ಥದ ಬೆಲೆ ತೀವ್ರ ಪಲ್ಲಟಕ್ಕೆ ಒಳಗಾಗುವಂತಿರಬೇಕು. ಪದಾರ್ಥದ ಗುಣಮಟ್ಟಾನುಸಾರವಾಗಿ ಅದನ್ನು ತಕ್ಕಮಟ್ಟಿಗೆ ನಿಖರವಾಗಿ ಶ್ರೇಣೀಕರಿಸುವುದು ಸಾಧ್ಯವಾಗಬೇಕು. ಇಲ್ಲದಿದ್ದರೆ ಮೋಸ್ತ್ರಗಳನ್ನು ನೋಡಿ ವ್ಯಾಪಾರ ಮಾಡುವಂತಿರಬೇಕು.

	ವಿನಿಮಯ ಕೇಂದ್ರದಲ್ಲಿ ನಡೆಯುವ ವಹಿವಾಟುಗಳನ್ನು ನಗದಿ ಮತ್ತು ವಾಯಿದಾ ಎಂದು ಎರಡು ಬಗೆಯಾಗಿ ವಿಂಗಡಿಸಬಹುದು. ಸರಕಿನ ಬಟವಾಡೆಯ ಒಪ್ಪಿಗೆ, ಬಟವಾಡೆ ಪಡೆದ ಮೇಲೆ ಹಣ ಪಾವತಿ-ಇವು ನಗದಿ ವಹಿವಾಟಿನ ಲಕ್ಷಣಗಳು. ವಾಯಿದಾ ಕರಾರುಗಳಲ್ಲಿ ವ್ಯಾಪಾರಿಗಳು ವ್ಯವಹರಿಸುವುದು ಪದಾರ್ಥದಲ್ಲಲ್ಲ, ಅದರ ಹಕ್ಕಿನಲ್ಲಿ, ಆದಕಾರಣ ಮಾರಾಟಗಾರ ಪದಾರ್ಥದ ಬಟವಾಡೆ ಮಾಡಬಹುದು, ಮಾಡದೆಯೂ ಇರಬಹುದು.

	ತನಗಾಗಿಯೇ ಪದಾರ್ಥಗಳನ್ನು ಮಾರುವುದು ಅಥವಾ ಕೊಳ್ಳುವುದು ಉತ್ಪನ್ನ ವಿನಿಮಯ ಕೇಂದ್ರದ ಉದ್ದೇಶವಲ್ಲ. ಶಿಷ್ಟೀಕರಣ, ಶ್ರೇಣೀಕರಣ, ಮಾರುಕಟ್ಟೆಯ ಸ್ಥಳ, ವಹಿವಾಟುಗಳ ನಿಯಂತ್ರಣ, ಪೇಟೆ ಪ್ರವೃತ್ತಿಗಳನ್ನು ಕುರಿತು ಸುದ್ದಿ ಪ್ರಕಟನೆ-ಮುಂತಾದ ನಾನಾ ಸೌಲಭ್ಯಗಳನ್ನು ಒದಗಿಸುವುದು ಕೇಂದ್ರದ ಉದ್ದೇಶ. ಒಂದು ಪದಾರ್ಥಕ್ಕೆ ಸಿದ್ಧವಾದ, ನಿರಂತರವಾದ ಮತ್ತು ತತ್‍ಕ್ಷಣದಲ್ಲಿ ಸರಕನ್ನು ಹಣಕ್ಕೆ ಪರಿವರ್ತಿಸಿಕೊಳ್ಳಬಹುದಾದ ಮಾರುಕಟ್ಟೆ ಒದಗಿಸುವುದರಲ್ಲಿ ವಿನಿಮಯ ಕೇಂದ್ರದ ಪ್ರಾಮುಖ್ಯವಿದೆ. ವಿವಿಧ ಮಾರುಕಟ್ಟೆಗಳಲ್ಲಿಯ ಬೆಲೆಗಳ ಸಮೀಕರಣ, ಅವುಗಳ ಸ್ಥಿರತೆಯ ಸ್ಥಾಪನೆ-ಇವು ವಿನಿಮಯ ಕೇಂದ್ರದಿಂದ ಸಾಧ್ಯವಾಗುತ್ತದೆ. ಇದು ಪೇಟೆಯ ಪ್ರವೃತ್ತಿಗಳ ಮಾಪನಸಾಧನ. ಬೆಲೆಗಳ ಏರಿಳಿತಗಳ ನಷ್ಟಸಂಭವಗಳಿಗೆ ರಕ್ಷಣೆಯನ್ನೊದಗಿಸುತ್ತದೆ. ನಷ್ಟಸಂಭವವನ್ನು ಎದುರಿಸುವ ಹೊಣೆಯನ್ನು ಕೇಂದ್ರದಲ್ಲಿ ವಹಿವಾಟು ನಡೆಸುವ ಪರಿಣತರಿಗೆ ಒಪ್ಪಿಸಿ ಕೊಡಬೇಕು. ಬೆಲೆಗಳ ಏರಿಕೆ ಅಥವಾ ಇಳಿಕೆಯ ಫಲವಾಗಿ ಸಂಭವಿಸುವ ನಷ್ಟವನ್ನು-ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಮಾಡಿಕೊಳ್ಳುವ ಒಪ್ಪಂದದ ಸಹಾಯದಿಂದ-ಅವರು ತಪ್ಪಿಸುತ್ತಾರೆ.

	ಭಾರತದಲ್ಲಿ ಉತ್ಪನ್ನ ವಿನಿಮಯ ಕೇಂದ್ರಗಳ ಬೆಳವಣಿಗೆ ಆರಂಭವಾದ್ದು ಒಂದನೆಯ ಮಹಾಯುದ್ಧದ ಅನಂತರ ಕಾಲದಲ್ಲಿ. ಭಾರತದಲ್ಲಿ ಇವು ನೋಂದಾಯಿತ ಸಂಘಗಳು ಅಥವಾ ನಿಗಮಿತ ಸಂಸ್ಥೆಗಳು ಅಥವಾ ಸ್ವಯಂ ಇಚ್ಛೆಯ ಸಂಘಗಳಾಗಿರುತ್ತವೆ. ಸಂಘಟಿತ ಉತ್ಪನ್ನ ವಿನಿಮಯಕೇಂದ್ರಗಳು 1952ಕ್ಕೆ ಮುಂಚೆ ರಾಜ್ಯಸರ್ಕಾರಗಳ ಕಾಯಿದೆಗಳಿಗೆ ಒಳಪಟ್ಟಿದ್ದುವು. 1952ರಲ್ಲಿ ಜಾರಿಗೆ ಬಂದ ಭಾರತದ ವಾಯಿದಾ ಕರಾರುಗಳ (ನಿಯಂತ್ರಣ) ಕಾಯಿದೆಯ ಪ್ರಕಾರ ಎಲ್ಲ ಉತ್ಪನ್ನ ವಿನಿಮಯ ಕೇಂದ್ರಗಳೂ ಕೇಂದ್ರಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ. ಇವುಗಳ ಮೇಲ್ವಿಚಾರಣೆ ಮತ್ತು ನಿರ್ದೇಶನಕ್ಕಾಗಿ ವಾಯಿದಾ ಮಾರುಕಟ್ಟೆಗಳ ಆಯೋಗವೆಂಬ ವಿಶೇಷ ಪರಿನಿಯತ ನಿಕಾಯವೊಂದು ಸ್ಥಾಪಿತವಾಗಿದೆ. (ಸಿ.ಸಿ.ಪಿ.)